“ಆವರಣದ ಅವಲೋಕನ “

ಆವರಣ, ಕಾದಂಬರಿಯ ಹೆಸರೇ ಹೇಳುವಂತೆ, ಸತ್ಯವನ್ನು ಮರೆಮಾಚುವ ಮಾಯೆಯ ಜಾಲವನ್ನು ಹಿಡಿದು ಅದರ ಮೂಲವನ್ನು ಪ್ರಶ್ನಿಸುವ ಹಾಗೂ ಇಂದಿನ ಯುವ ಪೀಳಿಗೆಗೆ ತಾವು ಓದಿದ ಇತಿಹಾಸದಲ್ಲಿ ಸತ್ಯ, ಸುಳ್ಳು, ಕಹಿಸತ್ಯವನ್ನು ಮರೆಮಾಚಲು ಮಾಡಿದ ಪ್ರಯತ್ನ ಮತ್ತು ಸುಳ್ಳನ್ನು ವಿಜೃಂಭಿಸಲಾಗಿದೆಯೇ ? ಎಂಬ ಪ್ರಶ್ನೆ ಮನದಟ್ಟಾಗಿ ಕಾಡುವಂತೆ ಮಾಡುತ್ತದೆ. ಕೆಲ ಬುದ್ಧಿಜೀವಿಗಳ ಮತ್ತು ಸರ್ಕಾರದ ನಡೆತೆ ಅನುಮಾನಾಸ್ಪದಕ್ಕೆ ಎಡೆ ಮಾಡಿಕೊಡುತ್ತದೆ.

ಇತಿಹಾಸ ಎಂದರೆ ಭೂತಕಾಲದ ಬಗೆಗಿನ ಮಾಹಿತಿ. ಇದು ಮಾನವ , ಕುಟುಂಬ, ಸಮಾಜ ಮತ್ತು ಜೈವಿಕ ಬದುಕಿನ ಆಗುಹೋಗುಗಳ ವೈಚಾರಿಕ ಚಿಂತನೆಯ ಮಹತ್ವವನ್ನು ತಿಳಿಸಿಕೊಡುತ್ತದೆ.

ಇತಿಹಾಸವು ಭೂತಕಾಲದ್ದು ನಾವು ಅದನ್ನು ಇಂದು ತಿದ್ದಲಾಗುವುದಿಲ್ಲ ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅದು ಒಳ್ಳೆಯದು ಅಥವಾ ಕೆಟ್ಟದಾಗಿರಲಿ ಎಲ್ಲವನ್ನೂ ಇತಿಹಾಸದಲ್ಲಿ ಸೇರಿಸುವುದು ಅತ್ಯಗತ್ಯ. ಮತ್ತು ಇತಿಹಾಸವು ಹಿಂದಿನ ಘಟನೆಗಳನ್ನು ಅಥವಾ ವೀರರನ್ನು ಶ್ಲಾಘಿಸುವುದರ ಬಗ್ಗೆ ಮಾತ್ರವಲ್ಲ, ಇಂದು ನಮ್ಮನ್ನು ಕೆರೆಳಿಸುವಂತಹದ್ದು ಆ ಕಾಲಘಟ್ಟದಲ್ಲಿ ಏಕೆ ಸಂಭವಿಸಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಮೊಘಲರು ಮತ್ತು ಬ್ರಿಟಿಷರು ನಮ್ಮನ್ನು ಶತಮಾನಗಳಿಂದ ಆಳಿದರು, ಗುಲಾಮರಂತೆ ಕಂಡರು ಇಲ್ಲಿ ನಮಗೆ ಮುಖ್ಯವಾದುದು ನಾವು ಯಾಕೆ ಅವರ ಅಧೀನದಲ್ಲಿ ಇದ್ದೆವು, ಭಾರತೀಯ ಸಾಮಾಜದಲ್ಲಿ ಏನು ತಪ್ಪುಗಳಾಗಿದ್ದವು ಎಂಬುದನ್ನು ಅರಿಯುವುದು. ಇದೆಲ್ಲವನ್ನು ಗಣನೆಗೆ ತೆಗೆದುಕೊಂಡು ಈಗಿನ ಇತಿಹಾಸದ ಪಠ್ಯ ಪುಸ್ತಕಗಳನ್ನ ರಚಿಸಬೇಕೇ ಹೊರತು, ರಾಜಕೀಯ ದುರುದ್ದೇಶದಿಂದಲ್ಲ. ಯಾವುದೇ ಒಂದು ವರ್ಗ, ಮತ, ಲಿಂಗ, ಅಥವಾ ಜನಾಂಗವನ್ನು ಮೆಚ್ಚಿಸಲು ಅಥವಾ ತೃಪ್ತಿಪಡಿಸಲೂ ಅಲ್ಲ. ಸತ್ಯವನ್ನು ತಿಳಿಯುವುದು ನಮ್ಮ ಹಕ್ಕು ಅದರಿಂದ ಯಾರೂ ವಂಚಿತರಾಗಬಾರದು.

ಮಧ್ಯಕಾಲೀನ ಭಾರತದ ಇತಿಹಾಸದಲ್ಲಿ ಭಾರತೀಯ ಇತಿಹಾಸಕಾರರ ದೃಷ್ಟಿಕೋನದ ಕೊರತೆ ಎದ್ದು ಕಾಣುತ್ತದೆ ಏಕೆಂದರೆ ಹೆಚ್ಚಿನ ಇತಿಹಾಸಕಾರರು ಈ ಕಾಲದಲ್ಲಿ ಭಾರತೀಯರಿಂದ ನಿಯೋಜಿಸಿದವರಲ್ಲ. ಭಾರತದ ಇತಿಹಾಸದಲ್ಲಿ ಚೋಳರು, ಪಾಂಡ್ಯರು, ವಿಜಯನಗರ ಸಾಮ್ರಾಜ್ಯ, ಇನ್ನು ಇತರೆ ದೇಶೀಯ ರಾಜವಂಶಗಳನ್ನು ಕಡೆಗಣಿಸಲಾಗಿದೆ. ಇದಕ್ಕೆ ಉದಾಹರಣೆಯಾಗಿ ರಾಬರ್ಟ್ ಸೆವೆಲ್ ಅವರು ವಿಜಯನಗರ ಸಾಮ್ರಾಜ್ಯದ ಕುರಿತು ಬರೆದ A FORGOTTEN EMPIRE ಎಂದರೆ ಮರೆತುಹೋದ ಮಹಾಸಾಮ್ರಾಜ್ಯ ಎಂಬ ಪುಸ್ತಕ ಸಾಕ್ಷಿಯಾಗಿ ನಿಂತಿದೆ. ಇದು ಹೀಗೆ ಮುಂದುವರೆದು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಇತಿಹಾಸವನ್ನು ಸಹ ಕೆಲವರ ಬಗ್ಗೆ ವಿಜೃಂಭಿಸಲಾಗಿದೆ, ಇಲ್ಲೂ ಸಹ ಸರ್ದಾರ್ ವಲ್ಲಭಭಾಯ್ ಪಟೇಲ್, ಸುಭಾಷ್ ಚಂದ್ರ ಬೋಸ್ ಮತ್ತು ಕೆಲವರನ್ನು ಕಡೆಗಣಿಸಿದ್ದಾರೆ.

ಇದೆಲ್ಲ ಒಂದು ಕಡೆಯಾದರೆ, ನಮ್ಮ ಯುವ ಪೀಳಿಗೆಗೆ ಇತಿಹಾಸದ ಕುರಿತಂತೆ ಇರುವ ನಿರ್ಲಕ್ಷ್ಯದೊಂದಿಗೆ ಸ್ಥಳೀಯ ಇತಿಹಾಸದಲ್ಲಿ ಸಹ ಒಲವಿಲ್ಲದಿರುವುದು ಇನ್ನೂಂದು ಗಂಭೀರವಾದ ಸಮಸ್ಯೆ. ಉದಾಹರಣೆಗೆ ನಾನು ಬಳ್ಳಾರಿ ಜಿಲ್ಲೆಯವನು. ಆದರೆ ಇಡೀ ಕರ್ನಾಟಕದ ಇತಿಹಾಸದಲ್ಲಿ ಕಲೆ, ಸಂಸ್ಕೃತಿ, ವಾಸ್ತುಶಿಲ್ಪ, ಯುದ್ಧಕೌಶಲ್ಯ ಇತರೆ ಎಷ್ಟೋ ವಿಷಯದಲ್ಲಿ ಉತ್ತುಂಗಕ್ಕೆ ಏರಿ ಇತರೆ ಭಾರತೀಯ ಸಾಮ್ರಾಜ್ಯಗಳಿಗೆ ಮಾದರಿಯಾದ ವಿಜಯನಗರ ಸಾಮ್ರಾಜ್ಯದ ಕುರಿತು ನಮ್ಮ ಸ್ಥಳೀಯರಿಗೆ ಎಷ್ಟು ತಿಳಿದಿದೆ? ತಿಳಿದಿದ್ದರೂ ಕೇವಲ ಸಾಮ್ರಾಜ್ಯದ ಹೆಸರು, ಸ್ವಾಮಿ ವಿರೂಪಾಕ್ಷನ ದೇವಾಲಯ, ರಾಜ ಶ್ರೀ ಕೃಷ್ಣದೇವರಾಯನ ಕಿರು ಪರಿಚಯ, ಹೊಸದಾಗಿ ಮುದ್ರಿತವಾದ ಐವತ್ತು ರೂಪಾಯಿ ನೋಟಿನ ಮೇಲಿರುವ ಕಲ್ಲಿನ ರಥದ ಚಿತ್ರ ಅಷ್ಟೆ. ಇಂತಹ ದೊಡ್ಡ ಸಾಮ್ರಾಜ್ಯದ ಕುರಿತೇ ನಮಗೆ ಬಹಳ ತಿಳಿದಿಲ್ಲವೆಂದರೆ ಇವರ ಸಾಮಂತರು, ಪ್ರಾದೇಶಿಕ ಮಟ್ಟದಲ್ಲಿ ಆಳಿದ ಅರಸರು, ಸ್ಥಳೀಯ ಮಟ್ಟದ ಹಲವಾರು ಐತಿಹಾಸಿಕ ಸಂಗತಿಗಳು ಹಾಗೂ ಅವರ ಕೊಡುಗೆಗಳ ಬಗ್ಗೆ ನಮಗೆಲ್ಲಿ ತಿಳಿಯಬೇಕು? ಇನ್ನೂ ವಿಷಾದದ ಸಂಗತಿಯೆಂದರೆ ಕರ್ನಾಟಕದ ಯಾವುದೇ ಜಿಲ್ಲೆಗೆ ಹೋದರೂ ನಾನು ಬಳ್ಳಾರಿಯವನೆಂದು ತಿಳಿದ ಮರು ಕ್ಷಣವೇ , ಓಹ್ ಗಣಿದಣಿಗಳು ಎಂದು ವ್ಯವಹರಿಸುತ್ತಾರೆಯೇ ಹೊರತು ವಿಜಯನಗರ ಸಾಮ್ರಾಜ್ಯದ ಕುರಿತೊ ಅಥವಾ UNESCO ಐತಿಹಾಸಿಕ ಸ್ಥಳಗಳ ಪಟ್ಟಿಯಲ್ಲಿ ಸೇರಿರುವ ಹಂಪಿಯಿಂದಲ್ಲವೆಂಬುದು.

ಹಂಪಿ, ಆನೆಗೊಂದಿ ಇತರೆ ಐತಿಹಾಸಿಕ ಸ್ಥಳಗಳು, ಇಲ್ಲಿ ಮೂಡಿಬಂದ ಕಲೆ, ಸಂಸ್ಕೃತಿ, ವಾಸ್ತುಶಿಲ್ಪ ನಮ್ಮ ಜಿಲ್ಲೆಯ ಶ್ರೀಮಂತಿಕೆಯನ್ನು ಹೆಚ್ಚಿಸುವೆಯೇ ಹೊರತು ಉಕ್ಕಿನ ಕಾರ್ಖಾನೆಗಳಲ್ಲ ಎಂಬುದು ನನ್ನ ಅನಿಸಿಕೆ.

ಮೊದಲು ಮನೆಗೆದ್ದು ಆಮೇಲೆ ಮಾರು ಗೆಲ್ಲು ಅಂತ ಹೇಳ್ತಾರೆ.. ಅಂದ್ರೆ ಮೊದಲ ಇತಿಹಾಸದ ಪ್ರಾರಂಭ ನಮ್ಮ ಮನೆಯಿಂದಲೇ ಆರಂಭವಾಗಬೇಕು.
ನಮ್ಮ ಮನೆತನಕ್ಕೆ ಇರುವ ಹೆಸರೂ ಒಂದು ಚರಿತ್ರೆಯೇ ಸರಿ.
ಮನೆ ಮನೆಗಳು ಸೇರಿ ಆದ ಊರಿಗೊಂದು ಹೆಸರು, ಆ ಊರಿಗೇಕೆ ಅದೇ ಹೆಸರು? ಕಾರಣ ಅಸ್ಪಷ್ಟ. ಅದರ ಆಳಕ್ಕೆ ಹೋಗುವ ಮಾತಿರಲಿ ಅದರ ತೀರಕ್ಕೂ ಹೋಗದೆ ದೂರದಿಂದಲೇ ನೋಡಿ ಸುಮ್ಮನಾಗುತ್ತೇವೆ.
ನಮ್ಮ ಊರ ಬಗೆಗಿನ ವಿಚಾರ ತಿಳಿದರೆ ಮಾತ್ರ ನಾವು ಯಾರೆಂದು ತಿಳಿಯಲು ಸಾಧ್ಯ. ಮೂಲಗಳ ಹುಡುಕಾಟ ಮನೆಯಿಂದಲೇ ಪ್ರಾರಂಭವಾದರೆ ಅದು ನಮ್ಮ ಸುತ್ತಲಿನ ಇತಿಹಾಸವ ಬಿಚ್ಚುತ್ತಾ ಹೋಗುತ್ತದೆ.

ಮೇಲ್ಕಂಡ ಈ‌ ಎಲ್ಲಾ ಅಂಶಗಳನ್ನ ಪರಿಗಣಿಸಿದ ತರುವಾಯ ಕೂಡ ನಮಗೆ ಉಳಿಯುವ ಪ್ರಶ್ನೆಗಳೆಯೆಂದರೆ.,
ಯುವ ಪೀಳಿಗೆಯಲ್ಲಿ ಇತಿಹಾಸದ ಕುರಿತಂತೆ ಇರುವ ನಿರ್ಲಕ್ಷ್ಯವೇ? ಸರ್ಕಾರದ ಕುರುಡುತನವೇ? ಶಿಕ್ಷಣ ಸಂಸ್ಥೆಗಳ ಅಲಕ್ಷ್ಯವೇ? ಇವುಗಳಾವು ಅಲ್ಲದೇಹೋದರೆ ಬಹುಶಃ ದೇಶ ತಂತ್ರಜ್ಞಾನದ ಪ್ರಗತಿಪರ ಹಾದಿಯಲ್ಲಿ ಸಾಗುತ್ತಿರುವಾಗ ಇಂತಹ ಸ್ಥಳೀಯ ಇತಿಹಾಸ ಉದಾಸೀನವಾಯಿತೇ?

ಏನೇ ಇರಲಿ ಹಿಂದಿನ ಅರಸರು ತಮ್ಮ ಪೂರ್ವಿಕರ ನೆನಪಿನಲ್ಲಿ ದೇವಾಲಯ, ಊರು, ಕೆರೆಗಳನ್ನ ಕಟ್ಟುತ್ತಿದ್ದರು. ಸಮಾಜದ ಸಂಪತ್ತಾದ ಐತಿಹಾಸಿಕ ಸ್ಮಾರಕಗಳು, ದೇವಾಲಯಗಳು, ಊರು, ಕೆರೆಗಳನ್ನು ಉಳಿಸಿಕೊಳ್ಳುವ ಕೆಲಸವಾದರೂ ನಮ್ಮಿಂದ ನಡೆಯಬೇಕು. ನಮ್ಮಲ್ಲಿ ಸ್ಥಳೀಯ ಇತಿಹಾಸದ ಆಸಕ್ತಿ ಹೆಚ್ಚಿಸಿಕೊಳ್ಳಬೇಕು, ಹಾಗೂ ಸಾರ್ವಜನಿಕರಲ್ಲಿ ಮತ್ತು ಯುವಕರಲ್ಲಿ ಅರಿವು, ಜಾಗೃತಿ ಮೂಡಿಸುವ ಕೆಲಸ ಶಿಕ್ಷಣ ಸಂಸ್ಥೆಗಳ ಗುರಿಯಾಗಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಇತಿಹಾಸ ದಾಖಲಿಸುವ ಜವಾಬ್ದಾರಿ ಹೊತ್ತವರು ಸ್ವಾರ್ಥ ಹಿತಾಸಕ್ತಿಗಳಿಗೆ ತುತ್ತಾಗದೆ, ತಾರತಮ್ಯ ಮಾಡದೆ ಇತಿಹಾಸವನ್ನು ದಾಖಲಿಸಬೇಕು. ದೇಶಕ್ಕೆ ಸತ್ಯವನ್ನು ತಿಳಿಯುವ ಹಕ್ಕಿದೆ ಎಂದು ಮರೆಯಬಾರದು.


” *THEY CANNOT MAKE HISTORY WHO FORGET HISTORY* ”

Dr B R Ambedkar—- ಬಸವರಾಜ್ ಬಿ ಯಂ

 244 total views

Sharing is caring!

4 thoughts on ““ಆವರಣದ ಅವಲೋಕನ “”

  1. ಪ್ರದೀಪ್ ಹೊಸಳ್ಳಿ

    ಅದ್ಭತವಾದ ಬರವಣಿಗೆ ಮತ್ತು ಸರಳ ಉಲ್ಲೇಖನ….

Leave a Reply

Your email address will not be published.